ಡ್ರಗ್ಸ್ ದಂಧೆಕೋರರಿಗೆ ಸಿಸಿಬಿ ಪೊಲೀಸರು ಮತ್ತೊಂದು ಬಿಗ್ ಶಾಕ್ ನೀಡಿದ್ದಾರೆ. ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್ನಿಂದ ಮತ್ತೊಂದು ಭರ್ಜರಿ ಕಾರ್ಯಾಚರಣೆ ನಡೆದಿದೆ.
ನಗರದ ಗಿರಿನಿಚಾಳ ಗ್ರೌಂಡ್ ಬಳಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಸಿಬಿ ತಂಡ, ಗಾಂಜಾ ಮಾರಾಟದಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದೆ.
ಬಂಧಿತರನ್ನು ಗಣೇಶಪೇಟೆ ನಿವಾಸಿ ಪಾಂಡು ರಾಯಬಾಗಿ ಮತ್ತು ಓಲ್ಡ್ ಹುಬ್ಬಳ್ಳಿ ನಿವಾಸಿ ಮುಜಾಫರ್ ಕಲೆಗಾರ ಎಂದು ಗುರುತಿಸಲಾಗಿದೆ.
ಬಂಧಿತರಿಂದ ಬರೋಬ್ಬರಿ 13.5 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಜಪ್ತಿಯಾದ ಗಾಂಜಾದ ಮೌಲ್ಯ ಅಂದಾಜು 7 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.
ಆರೋಪಿಗಳನ್ನು ಮುಂದಿನ ವಿಚಾರಣೆಗಾಗಿ ಉಪನಗರ ಪೊಲೀಸರಿಗೆ ಹಸ್ತಾಂತರಿಸಲಾಗಿದ್ದು, ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸ್ ಆಯುಕ್ತ ಭೂಷಣ್ ಗುಲಾಬರಾವ್ ಬೊರಸೆ, ಡಿಸಿಪಿಗಳಾದ ಶೃತಿ ಹಾಗೂ ರವೀಶ್ ಅವರ ಮಾರ್ಗದರ್ಶನದಲ್ಲಿ, ಸಿಸಿಬಿ ಎಸಿಪಿ ಶಿವಪ್ರಕಾಶ್ ನಾಯಕ ನೇತೃತ್ವದಲ್ಲಿ, ಇನ್ಸ್ಪೆಕ್ಟರ್ ಕಾಂಬಳೆ ಹಾಗೂ ಸಿಸಿಬಿ ಸಿಬ್ಬಂದಿಗಳು ಈ ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ.
ಮಾದಕ ವಸ್ತುಗಳ ಜಾಲಕ್ಕೆ ಕಡಿವಾಣ ಹಾಕಲು, ಯುವಜನತೆಯ ಭವಿಷ್ಯ ರಕ್ಷಿಸುವ ನಿಟ್ಟಿನಲ್ಲಿ ಪೊಲೀಸರ ದಿಟ್ಟ ಹೆಜ್ಜೆಗೆ ಸಾರ್ವಜನಿಕರ ಮೆಚ್ಚುಗೆ ವ್ಯಕ್ತವಾಗಿದೆ.